ಧನುರ್ವಿದ್ಯೆ
ಬಿಲ್ಲು ಬಾಣಗಳ ಪ್ರಯೋಗವಿಧಾನವನ್ನು ತಿಳಿಸುವ ವಿದ್ಯೆ. ಪ್ರಾಚೀನ ಕಾಲದಿಂದಲೂ ಇದು ಬಹಳ ಪ್ರಸಿದ್ಧವಾಗಿದೆ. ಬೇಟೆಯಾಡುತ್ತಿದ್ದ ಆದಿಮಾನವ ಅದಕ್ಕಾಗಿ ಬಿಲ್ಲು ಬಾಣಗಳನ್ನು ಉಪಯೋಗಿಸುತ್ತಿದ್ದ.  ಕೊನೆಗೊಮ್ಮೆ ಅದು ಯುದ್ಧಗಳಲ್ಲೂ ಬಳಕೆಗೆ ಬರತೊಡಗಿತು. ಅಗಸ್ತ್ಯ ಪರಶುರಾಮ ಹಾಗೂ ಭಾರದ್ವಾಜ ಇವರನ್ನು ಧನುರ್ವಿದ್ಯೆಯ ಆಚಾರ್ಯರೆಂದು ಮಹಾಭಾರತದಲ್ಲಿ ಹೇಳಿದೆ.

	ಋಗ್ವೇದದಲ್ಲಿ ಧನುರ್ಬಾಣಗಳ ಉಲ್ಲೇಖವಿದೆ. ಹೀಗೆಯೇ ಐತರೇಯ ಬ್ರಾಹ್ಮಣದಲ್ಲಿ ಇಷುವಿನ (ಬಾಣ) ಉಲ್ಲೇಖವಿದೆ. ವೇದಕಾಲದಿಂದ ವಿಜಯನಗರದಿಂದ ಕಾಲದವರೆಗೆ ಧನುರ್ಬಾಣಗಳು ಭಾರತೀಯ ವೀರರ ಶ್ರೇಷ್ಠ ಆಯುಧಗಳೆಂದು ಗಣನೆಗೊಂಡಿದ್ದವು. ಧನುವಿನಲ್ಲಿ ಶಾಙ್ರ್ಗ ಮತ್ತು ವಂಶ ಎಂದು ಎರಡು ವಿಧ. ಶಾಙ್ರ್ಗವೆಂಬುದು ಶೃಂಗದಿಂದ (ಕೊಂಬು) ಆದುದು. ವಂಶವೆಂಬುದು ಬಿದಿರಿನಿಂದಾದುದು ಕೌಟಿಲ್ಯನ ಅರ್ಥಶಾಸ್ತ್ರದ ಪ್ರಕಾರ ಕಾರ್ಮುಕ, ಕೋದಂಡ, ದ್ರುಣ ಮತ್ತು ಧನು ಎಂದು ಧನುಸ್ಸಿನಲ್ಲಿ ನಾಲ್ಕು ಪ್ರಕಾರ. ಕಾರ್ಮುಕ ತಾಳವೃಕ್ಷದಿಂದಾದುದು. ಕೋದಂಡ ಬಿದಿರಿನಿಂದಾದುದು.  ದ್ರುಣ ಚಂದನಾದಿಕಾಷ್ಠದಿಂದಾದುದು. ಧನು ಅಸ್ಥಿ ಅಥವಾ ಶೃಂಗದಿಂದಾದುದು ಶೃಂಗವೆಂಬುದು ರೇಡ, ಮಹಿಷ, ಖಡ್ಗ, ಹಾಗೂ ಶರಭಗಳಲ್ಲಿ ಯಾವುದಾದರೂ ಪ್ರಾಣಿಯದಾಗಿರಬಹುದು. ಧನುಸ್ಸನ್ನು ಅದರ ಉದ್ದಳತೆ ಇಲ್ಲವೆ ಭಾರವನ್ನವಲಂಬಿಸಿ ವಿಂಗಡಿಸಿರುವುದುಂಟು.  ಕೋದಂಡಮಂಡನ ಎಂಬ ಗ್ರಂಥದಲ್ಲಿ ಹದಿನೆಂಟು ಜಾತಿಯ ಧನುಸ್ಸುಗಳನ್ನು ವಿವರಿಸಿದೆ. ರಾವಣನಂಥ ಬಲಾಡ್ಯ ರಾಕ್ಷಸನೂ ಎತ್ತದಂಥ ಧನುಸ್ಸುಗಳು ಇದ್ದುವೆಂದು ರಾಮಾಯಣದಿಂದ ತಿಳಿದುಬರುತ್ತದೆ. ಧನುಸ್ಸುಗಳಲ್ಲಿ ವಿಷ್ಣುವಿನ ಶಾಙ್ರ್ಗ, ಶಿವನ ಪಿನಾಕ, ಶ್ರೀರಾಮನ ಕೋದಂಡ ಮತ್ತು ಅರ್ಜುನನ ಗಾಂಡೀವ-ಇವು ಬಹು ಪ್ರಸಿದ್ಧವಾದುವು.

	ಬಾಣ ಇಲ್ಲದಿದ್ದರೆ ಧನುಸ್ಸಿನಿಂದ ಏನೂ ಲಾಭವಿಲ್ಲ. ಶತಪಥ ಬ್ರಾಹ್ಮಣದಲ್ಲಿ ಬಾಣದ ಉಗಮ ಇಂದ್ರನ ವಜ್ರದಿಂದಾಯಿತು ಎಂದು ವಿವರಿಸಿದೆ. ಬಾಣ ಉಕ್ಕು ಇಲ್ಲವೆ ಬಿದಿರಿನಿಂದ ಮಾಡಲ್ಪಟ್ಟದ್ದು. ಅದಕ್ಕೆ ಹಂಸ, ಮಯೂರ, ಗರುಡ ಇತ್ಯಾದಿ ಪಕ್ಷಿಗಳ ಗರಿಗಳನ್ನು ಬಾಲಭಾಗದಲ್ಲಿ ಹಚ್ಚಿರುತ್ತಿದ್ದುಂಟು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ವೇಣೂ, ಶರ, ದಂಡಶರ, ಶಲಾಕ ಮತ್ತು ನಾರಾಚ ಎಂದು ಐದು ಬಗೆಯ ಬಾಣಗಳನ್ನು ವಿವರಿಸಿದೆ. ಬಾಣಗಳಲ್ಲಿ ಬ್ರಹ್ಮಾಸ್ತ್ರ, ಪಾಶುಪತಾಸ್ತ್ರ, ನಾರಾಯಣಾಸ್ತ್ರ, ಸರ್ಪಾಸ್ತ್ರ, (ಕಾರ್ಕೋಟಕಾಸ್ತ್ರ)-ಇವು ಸುಪ್ರಸಿದ್ದ. ಇವೆಲ್ಲ ಮಂತ್ರಸಿದ್ಧವಾದವು. ಬಿಲ್ವಿದ್ಯೆಯಲ್ಲಿ ರಾಮ ಹಾಗೂ ಅರ್ಜುನರು ಅಸಮಾನರು. ಸ್ವಯಂವರಗಳಲ್ಲಿ ಬಿಲ್ವಿದ್ಯೆ ತನ್ನದೇ ಆದ ಸ್ಥಾನವನ್ನು ಪಡೆದಿತ್ತು. ಪ್ರತಿಬಿಂದ ವೇದ, ಶಬ್ದವೇಧ, ಚಮತ್ಕಾರಗಳು ಈ ವಿದ್ಯೆಯಲ್ಲಿದ್ದವು.

	ಧನುರ್ವಿದ್ಯೆಗೆ ಧನುರ್ವೇದ ಎಂಬ ಖ್ಯಾತಿ ಇದೆ. ಇದನ್ನು ಯಜುರ್ವೇದದ ಉಪವೇದ ಎಂದು ಹೇಳಲಾಗುತ್ತದೆ. ಬಿಲ್ಲುಗಾರ ತನ್ನ ಬೆನ್ನ ಮೇಲೆ ಕಟ್ಟಿಕೊಳ್ಳುತ್ತಿದ್ದ ಬಾಣದ ಚೀಲಕ್ಕೆ ತೂಣೀರವೆನ್ನುತ್ತಿದ್ದರು. ಬಾಣಗಳ ತುದಿಗೆ ನಂಜಿನ ಲೇಪನ ಮಾಡುತ್ತಿದ್ದುದೂ ಉಂಟು. ಪ್ರಯೋಗಾಭಾವದಿಂದ ಈ ಶಾಸ್ತ್ರ ಕ್ರಮೇಣ ನಷ್ಟವಾಯಿತು.  ಚಂದ್ರಗುಪ್ತಮೌರ್ಯನ ಸೈನ್ಯದಲ್ಲಿ ಅಸಂಖ್ಯಾತ ಬಿಲ್ಲುಗಾರರಿದ್ದರೆನ್ನಲಾಗಿದೆ. ಅವರು ಕುದುರೆ ಆನೆಗಳ ಮೇಲೆ ಕುಳಿತೋ ಪದಾತಿಗಳಾಗಿಯೋ ಬಿಲ್ಲು ಹಿಡಿದು ಯುದ್ಧ ಮಾಡುತ್ತಿದ್ದರು.

	ಪಾಶ್ಚಾತ್ಯರಲ್ಲೂ ಇಂದಿನ ನವೀನ ಅಸ್ತ್ರಗಳು ಬಳಕೆಗೆ ಬರುವ ಮೊದಲು ಬಿಲ್ಲು ಬಾಣಗಳೇ ಬಳಕೆಯಲ್ಲಿದ್ದವು.  ರಾಬಿನ್ ಹುಡ್ ಮತ್ತು ವಿಲಿಯಂ ಟೆಲ್ ಮೊದಲಾದವರ ಕಥೆಗಳಲ್ಲಿ ಬಿಲ್ಲುಬಾಣಗಳ ವಿಷಯ ಪ್ರಧಾನವಾಗಿ ಬರುತ್ತದೆ. ಇವತ್ತು ಬಿಲ್ಲು ವಿದ್ಯೆ ಒಂದು ಕ್ರೀಡಾ ವಿನೋದವಾಗಿದೆ.
(ಎಸ್.ಎಸ್.ಜೆಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ